ಅಹೋಂ

ಈ ಜನ ಒಂದನೆಯ ಶತಮಾನದಲ್ಲೇ ಚೀನದ ಯುನಾನ್ ಪ್ರಾಂತ್ಯದಿಂದ ದಕ್ಷಿಣಕ್ಕೆ ವಲಸೆ ಹೊರಟು ಇಂಡೋಚೀನ ಮತ್ತು ಉತ್ತರ ಬರ್ಮ ದೇಶಗಳಲ್ಲಿ ನೆಲೆಸಿದರು. ಹದಿಮೂರನೆಯ ಶತಮಾನದ ಆದಿಭಾಗದಲ್ಲಿ ಇವರಲ್ಲಿ ಕೆಲವರು ಅಸ್ಸಾಮಿನ ಉತ್ತರ ಭಾಗಕ್ಕೆ ವಲಸೆಬಂದರು. ಈ ಜನ ಅಲ್ಲಿ ತಳ ಊರುವುದಕ್ಕೆ ಅಲ್ಲಿನ ಆದಿವಾಸಿಗಳ ಬೋಡೋ ಜನರೊಂದಿಗೆ ಎರಡು ಶತಮಾನಗಳ ಕಾಲ ಹೋರಾಡಬೇಕಾಯಿತು. 16ನೆಯ ಶತಮಾನದ ಹೊತ್ತಿಗೆ ಅಸ್ಸಾಮಿನ ಉತ್ತರ ಭಾಗದಲ್ಲೆಲ್ಲ ಈ ಜನ ಪಸರಿಸಿದ್ದರು. ಇವರಿಂದಲೇ ಅಸ್ಸಾಂ ಎಂಬ ಹೆಸರು ಬಂದಿರುವುದು. ಈ ಜನರ ರಾಜ್ಯಡಳಿತದಲ್ಲೊಂದು ವೈಶಿಷ್ಟ್ಯವಿತ್ತು. ದೊರೆ ನಿರಂಕುಶ ಪ್ರಭುವಲ್ಲ; ರಾಜಮನೆತನದಲ್ಲಿ ಅರ್ಹನಾದೊಬ್ಬನನ್ನು ಸಾಮಂತಮಂಡಲಿ ನೇಮಿಸುತ್ತಿತ್ತು. ಧೀರರೂ ಶೂರರು ಆಗಿದ್ದ ಈ ಜನರು ಔರಂಗಜೇóಬನ ಕಾಲದಲ್ಲಿ ದಂಡೆತ್ತಿ ಬರಲೆತ್ನಿಸಿದ ಮೊಗಲ ಸೈನ್ಯವನ್ನೇ ಯಶಸ್ವಿಯಾಗಿ ತಡೆಗಟ್ಟಿದರು. 18ನೆಯ ಶತಮಾನ ಕಳೆಯುವ ಹೊತ್ತಿಗೆ ದಕ್ಷಿಣ ಅಸ್ಸಾಮನ್ನೂ ಗೆದ್ದು ಆಳುತ್ತಿದ್ದರು.

	ಹಿಂದೂ ಧರ್ಮ, ಸಂಸ್ಕøತಿಗಳಿಗೆ ಮಾರುಹೋಗಿದ್ದ ಇವರು 1714ರಲ್ಲಿ ವಿಧಿವಿಹಿತವಾಗಿ ಅವುಗಳನ್ನವಲಂಬಿಸಿದರು. ಕ್ರಮೇಣ ತಮ್ಮ ಹಿಂದಿನ ಆಚಾರ ವಿಚಾರಗಳನ್ನು ಮರೆತರು. ತಮ್ಮ ಹಿಂದಿನ ಭಾಷೆಯನ್ನೂ ಮರೆತು, ಬಂಗಾಳೀ ಭಾಷೆಗೆ ಸಂಬಂಧವಿರುವ ಅಸ್ಸಾಮೀ ಭಾಷೆಯನ್ನೂ ಸಾಹಿತ್ಯವನ್ನೂ ಬೆಳೆಸಿದರು.  ಈಗ ಇವರು ಎಲ್ಲ ವಿಷಯಗಳಲ್ಲೂ ಭಾರತೀಯರೇ  ಆಗಿದ್ದಾರೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ